ಮಂಗಳವಾರ, ನವೆಂಬರ್ 20, 2012

ಉದ್ಯೋಗ -- ಒಂದು ಮರೀಚಿಕೆಯೇ??


ಉದ್ಯೋಗ - ಇದು ಪ್ರತಿಯೊಬ್ಬ ನಾಗರಿಕನಿಗೂ ಇರಬೇಕಾದ ,ಅಗತ್ಯತೆಯನ್ನು ಪೂರೈಸುವ ಒಂದು ಮಾರ್ಗ."ಕಾಯಕವೇ ಕೈಲಾಸ " ಎಂಬುದು ಸುಪ್ರಸಿಧ್ಧ ನಾಣ್ಣುಡಿ.ಸನಾತನ ಕಾಲದಿಂದಲೂ ಇದು ಬಳಕೆಯಲ್ಲಿದೆ.ನೂರಾಹತ್ತು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಭಾರತದಲ್ಲಿ ಇದು ಬಿಡಿಸಲಾಗದ ಗಂಟಾಗುತ್ತಿದೆಯೇ?,ಜನಸಂಖ್ಯೆ ಹೆಚ್ಚಾದಂತೆ ಉದ್ಯೋಗ ಸಮಸ್ಯೆಯೂ ಹೆಚ್ಚಾಗುತ್ತಿದೆ.ಇನ್ನು ನಮ್ಮ ಕರ್ನಾಟಕದ ಉದ್ಯೋಗ ಶಕ್ತಿಕೇಂದ್ರ ಬೆಂಗಳೂರು.ರಾಜ್ಯದ ಪ್ರತಿಯೊಬ್ಬ ಕಾಲೇಜು ವಿದ್ಯಾರ್ಥಿಯು ತನ್ನ ವಿಧ್ಯಾಭ್ಯಾಸದ ನಂತರ,ಭವಿಷ್ಯ ರೂಪಿಸಿಕೊಳ್ಳಲು ಆಯ್ದುಕೊಳ್ಳುವ ಜಾಗ ಬೆಂಗಳೂರು.ಇದು ಜಾಗತಿಕ ಕ್ಷೇತ್ರದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು,ಸಹಜವಾಗಿಯೇ ಉದ್ಯೋಗಾಸಕ್ತರು ಇಲ್ಲಿಗೆ ಆಕರ್ಷಿತರಾಗುತ್ತಾರೆ.

 

         ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು,ಕೈತುಂಬಾ ಸಂಬಳ ಕೊಡುವ ಖಾಸಗಿ ಕಂಪನಿಗಳು,ಇವೆಲ್ಲಾ ಆಕರ್ಷಣೆಯ ಕೇಂದ್ರಗಳು.ಕಳೆದ ೧೦ವರ್ಷಗಳಿಂದ ತ್ವರಿತಗತಿಯಲ್ಲಿ ಬೆಳೆಯುತ್ತಿರುವ  ಬೆಂಗಳೂರಿಗೆ ಈಗ ಜನಸಂಖ್ಯೆಯ ಭಾರ ತಗಲುತ್ತಿದೆ.ಉದ್ಯೋಗ ಅರಸಿ ಬರುವ ಯುವಕ ,ಯುವತಿಯರಿಗೆ ನೆಲೆಯಿಲ್ಲದಿರುವುದು ಆತಂಕಕಾರಿ ವಿಷಯವೇ ಸರಿ.ಇಷ್ಟಲ್ಲದೆ ಇಲ್ಲಿ ನೆಲೆಸಿರುವುದು ಹೊರರಾಜ್ಯಗಳಿಂದ ಬಂದಿರುವವರು.ಆದ್ದರಿಂದ ಎಲ್ಲಿಂದಲೋ ಬಂದವರ ಜೊತೆ ಉದ್ಯೋಗಕ್ಕಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ.ಇದಕ್ಕೆ ಕಾರಣ ಎಂ.ಎನ್.ಸಿ ಗಳು ಎಂದು ನೇರವಾಗಿ ಆರೋಪಿಸಿದರೂ ತಪ್ಪಿಲ್ಲ.ಮನಸ್ಸಿಗೆ ಬಂದಂತೆ ಬಾಡಿಗೆ ಪಡೆಯುವ ಮನೆಮಾಲೀಕರು,ದುಬಾರಿ ಬೆಲೆಗಳ ದಿನೋಪಯೋಗಿ ವಸ್ಥುಗಳು,ಇವುಗಳ ಖರ್ಚು ವೆಚ್ಚಗಳನ್ನು ರೈತಹಿನ್ನಲೆಯಿಂದ ಬಂದ ಯುವಜನಾಂಗಕ್ಕೆ ಬರಿಸುವುದು ಕಷ್ಟ.ವರ್ಷಕ್ಕೆ ಅಬ್ಬಬ್ಬಾ ಅಂದರೂ ೧೫ರಿಂದ ೨೦ಸಾವಿರ ವಾರ್ಷಿಕ ವರಮಾನವಿರುವ ಕುಟುಂಬದಿಂದ ಬರುವ ಯುವಜನತೆಗೆ ತಿಂಗಳಿಗೆ -೧೦ ಸಾವಿರ ಖರ್ಚು ಬರಿಸುವುದು ಅಸಾಧ್ಯ.ಇದು ಒಂದು ಪ್ರಾತ್ಯಕ್ಷಿಕೆಯಾದರೆ,ಉದ್ಯೋಗ ಅರಸಿ ಬರುವರಿಗೆ ಈಗಿನ ೨ವರ್ಷದಿಂದ ತುಂಬಾನೇ ತೊಂದರೆಯಿದೆ.ಉದ್ಯೋಗ ಹುಡುಕುವುದು ತಂಬಾ ಕಷ್ಟ.ಇದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದೆ :-

 

       ಅಜಯ್ ಶಿವಮೊಗ್ಗ ಜಿಲ್ಲೆಯ ಸಾಗರದ ಸಮೀಪದ ಒಂದು ಹಳ್ಳಿಯವ.(ಹೆಸರು ,ಊರು ಬದಲಿಸಿದೆ).೨ವರ್ಷದ ಹಿಂದೆ ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದು  ಪರಿಚಯದವರ ಮುಖಾಂತರವೋ ಕಾಡಿ ಬೇಡಿ ಉದ್ಯೋಗ ದೊರಕಿಸಿಕೊಂಡ.ಅದು ಖಾಸಗಿ ಕಂಪನಿ,ಸಂಬಳ ೭೦೦೦.ಹೊಸದಾಗಿ  ಕೆಲಸ ಸೇರುವವರಿಗೆ ಬೆಂಗಳೂರಿನಲ್ಲಿ ೭೦೦೦ ಸಿಗುವುದೇ ಉತ್ತಮ.ಹೀಗೆ ಸುಮಾರು ೬ತಿಂಗಳು ಕಳೆದ ನಂತರ ಆತ ಯಾವುದೋ ಒತ್ತಡ ಪರಿಸ್ಥಿಗೆ ಒಳಗಾಗಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟ.ತದಾದ ೨ತಿಂಗಳ ನಂತರ ಮತ್ತೆ ಬೆಂಗಳೂರಿಗೆ ಬಂದ,ಉದ್ಯೋಗ ಅರಸಿ.ಒಮ್ಮೆ ಕೆಲಸ ಬಿಟ್ಟಿದ್ದ ಮತ್ತೆ ಅದು ಸಿಗಲಿಲ್ಲ.ಹೀಗಿರುವಾಗ ಒಮ್ಮೆ ಆತನ ರೂಮ್ ಮೇಟ್ , ಒಬ್ಬರ ಬಳಿ ಮಾತಾನಾಡಿ ಕೆಲಸ ಕೊಡಿಸಿದ.ಆದರೆ ಸಂಬಳ ಮೊದಲಿಗಿಂತ ಕಡಿಮೆ,ಕೇವಲ ೪೦೦೦,ಇದರಲ್ಲಿ ಆತ ಏನು ಮಾಡಬಲ್ಲ??.ಹೋಗಲಿ ಹೇಗೋ ಇಷ್ಟಾದರೂ ಬರುತ್ತಲ್ಲಾ ಎಂದು ಸಮಾಧಾನ ಮಾಡಿಕಳ್ಳಬಹುದಿತ್ತು.ಆದರೆ,ಆತ ಇದರ ಜೊತೆಗೆ ಇದ್ದಕ್ಕಿದ್ದ ಹಾಗೆ ಸಿ. ಮತ್ತು ಎಂ.ಕಾಂ ಗಳನ್ನು ಕಟ್ಟಿದ.ದುಡ್ಡೆಲ್ಲಿಂದ ಬಂತು? ೧೩೦೦೦ ಸಾವಿರ ಸಾಲ ಮಾಡಿದ್ದ.ಕಷ್ಟಪಟ್ಟು ಓದಿದ ಆದರೆ,ಪರೀಕ್ಷೆ ಬರೆಯಬೇಕಲ್ಲಾ...? ಪುನಃ ಕೆಲಸಕ್ಕೆ ರಾಜೀನಾಮೆ ಪ್ರಸಂಗ.ಆಮೇಲೆ ಪರೀಕ್ಷೆಯು ಫೇಲಾಯಿತು.ಮತ್ತೆ ಜೀವನೋಪಾಯಕ್ಕೆ ಬೆಂಗಳೂರು.ಈಗ ಮೊದಲಿಗಿಂತ ಕಷ್ಟ.ಸಹಚರರು ಸಹಾಯ ಮಾಡಲು ಸಿದ್ದರಿಲ್ಲ.ಅಜಯ್ ನಂಬುವಂತೆಯೇ ಇಲ್ಲ.ಹಾಗೂ  ಹೀಗೂ ಕೆಲಸವೇನೋ ಸಿಕ್ಕಿತು. ಅದು ೪೦೦೦ ಕ್ಕೆ.ಓದಿಗೆ ಮಾಡಿದ ಸಾಲ ತೀರಿಸಬೇಕು.ಮನೆಯಲ್ಲಿ ಬಡತನ ಬೇರೆ.ಆತ ಏನು ಮಾಡಬಲ್ಲ.?? ಇದೊಂದು ನಿದರ್ಶನವಷ್ಟೇ.

 

       ಆದರೆ ನೈಜ ಘಟನೆ.ನಾಗಾಲೋಟದಲ್ಲಿ ಓಡುತ್ತಿರುವ  ಜೀವನ ಸ್ಥಿತಿಗತಿಗಳ ಜೊತೆ ಸ್ಪರ್ಧೆ ನಿಜಕ್ಕೂ ಕಷ್ಟಕರವಾಗುತ್ತಿದೆ.ಎಷ್ಟು ಚೆನ್ನಾಗಿ ಓದಿದರೂ ,ಡಿಸ್ಟಿಂಕ್ಷನ್ ಬಂದರೂ,ಬೆಂಗಳೂರಿಗೆ ಉದ್ಯೋಗ ಅರಸಿಬಂದಾಗ ಅದೆಲ್ಲಾ ನಗಣ್ಯವಾಗುವುದು.ಇಲ್ಲಿ ಇಂಗ್ಲೀಷ್ ಗೊತ್ತಿರುವ ಮ್ಯಾನೇಜರ್ ಅವನ ಕ್ವಾಲಿಫಿಕೇಶನ್ ಎಸ್.ಎಸ್.ಎಲ್.ಸಿ ಫೇಲ್.ಆತನ ಕೈಕೆಳಗಿನವನ ಕೈಕಳಗೆ ಕೆಲಸಮಾಡುವ ,೬೦೦೦ ಸಂಬಳ ಪಡೆಯುವ ಕೂಲಿ ಸಾಫ್ಟ್ ವೇರ್ ಎಂಜಿನಿಯರ್,ಎಂತಹಾ ವಿಪರ್ಯಾಸ.

 
       ಒಮ್ಮೆ ಸಿಕ್ಕ ಕೆಲಸ ಕೈಬಿಟ್ಟರೆ ಕೆಲಸ ಸಿಗುವುದು ತುಂಬಾ ಕಷ್ಟ,ಸಿಕ್ಕರೂ ಮೊದಲಿಗಿಂತ ಕಡಿಮೆ ಸಂಗಳದ್ದು.ಪ್ರಸಕ್ತ ಸಾಲಿನಲ್ಲಿ ಎಲ್ಲಾ ತರಹದ ಕಂಪನಿಗಳು ಉದ್ಯೋಗವನ್ನು ಕಡಿಮೆ ಪ್ರಮಾಣದಲ್ಲಿ ಒದಗಿಸುತ್ತಿದೆ.ಅದೂ ಸಂಬಳ ಕೇವಲ ೪೫೦೦ ರಿಂದ ೮೦೦೦ ಗರಿಷ್ಠ.ಅದು ಹೊಸದಾಗಿ ಸೇರುವವರಿಗೆ.ಆದರೆ ಇಂದಿನ ದಿನಗಳಲ್ಲಿ ೨ವರ್ಷ ಅನುಭವಿಗಳನ್ನು ಜಾಸ್ತಿ ಕೇಳುತ್ತಾರೆ.ಆದರೆ ಅವರಿಗೆ ಕೊಡುವ ಸಂಬಳವೇ ೭೦೦೦ - ೮೦೦೦.ಹೀಗಿರುವಾಗ ಅನುಭವಿಗಳು ಉದ್ಯೋಗ ಬದಲಿಸುವ ಮಾತೆಲ್ಲಿ??ಇವರ ಕತೆ ಹೀಗಾದರೆ ಹೊಸಬರಿಗೆ ಎಲ್ಲಿಂದ ಅವಕಾಶ??ಇದಕ್ಕೆ ಕಾರಣ ,ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತೀಯ ಮೌಲ್ಯದ ಕುಸಿತವೇ?ಅಥವಾ ಸರ್ಕಾರದ ರೀತಿ ನೀತಿಗಳೇ? ಇದಕ್ಕೆ ಸ್ಪಷ್ಟ ಕಾರಣ ಹುಡುಕುವುದು ಕಷ್ಟ.ಇನ್ನು ಭಾರಿ ಬಹುತೇಕ ಕಂಪನಿಗಳು ಸಂಬಳವನ್ನು ಸರ್ಕಾರಿ ನಿಯಮದಂತೆ ಜಾಸ್ತಿ ಮಾಡಿಲ್ಲ.ಇದು ಉದ್ಯೋಗಸ್ಥರ ಅಸಮಾಧಾನಕ್ಕೆ ಕಾರಣ.

 

        ಇರುವ ಒಂದೇ  ಒಂದು ಆಶಾವಾದದ ಉದ್ಯೋಗವೆಂದರೆ ಸೇಲ್ಸ್ ಮ್ಯಾನ್ ಕಂ ಮಾರ್ಕೆಟಿಂಗ್ .ಆದರೆ ಇದನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ.ಇದಕ್ಕೆ ಮನಸ್ಸುಮಾಡುವವರು ಕಡಿಮೆ.ಇನ್ನು ಸ್ವಂತ ಉದ್ಯೋಗ ಮಾಡುವುದು ಬೆಂಗಳೂರಿನಂತಹ ದುಬಾರಿನಗರಗಳಲ್ಲಿ ದುಸ್ಸಾಹಸವೇ ಸರಿ.ಇನ್ನು ಸ್ವಂತ ಊರುಗಳಲ್ಲಿ ಉದ್ಯೋಗ ಕೆಲವರಿಗೆ ಅಸಾಧ್ಯದ ಮಾತು.ಮುಖ್ಯವಾಗಿ ತಾಂತ್ರಿಕ ಕೊರತೆ ಎದ್ದು ಕಾಣುತ್ತದೆ. ಜೊತೆಗೆ ಗರಿಷ್ಟ ಲಾಭದ ಹವಣಿಕೆ ಇಲ್ಲಿ ಸಾಧ್ಯವಿಲ್ಲ. ಹೀಗಿರುವಾಗ ಜನಸಾಮಾನ್ಯರ ಅದರಲ್ಲೂ ಉದ್ಯೋಗಾಸಕ್ತ ಯುವಜನತೆಯ ಕತೆಯೇನು?ಅವರ ಭವಿಷ್ಯವೇನು? ಉದ್ಯೋಗ  ಎಂಬುದು ಶ್ರೀಸಾಮಾನ್ಯನಿಗೆ ಮರೀಚಿಕೆಯಾಗುತ್ತೆದೆಯೇ...?ಆತನ ಸಂಸಾರದ ನೊಗ ಹೊರುವವರಾರು?ಇದಕ್ಕೆಲ್ಲಾ ಉತ್ತರ ಎಂದು?ಎಂಬ ಪ್ರಶ್ನೆಗಳು ನಮ್ಮನ್ನು ಕಾಡದೇ ಇರದು..

 

          ಉತ್ತರ ಖಂಡಿತಾ ಇದೆ.ಪ್ರತಿಯೊಂದು  ಸಮಸ್ಯೆಗೂ ಪರಿಹಾರ ಇದ್ದೇ ಇದೆ.ಕೆಲವು ಸನ್ನಿವೇಶಗಳು ನಮ್ಮನ್ನು ನಿಷ್ಕ್ರಿಯಗೊಳಿಸಬಹುದು.ಆದರೆ ನಿಧಾನವಾಗಿ,ಕ್ರಿಯಾತ್ಮಕವಾಗಿ ಆಲೋಚಿಸಿದರೆ  ಒಂದಲ್ಲ,ನೂರಾರು ದಾರಿಗಳು ಗೋಚರಿಸುವುದು.ಸ್ವಂತ ಉದ್ಯೋಗ ಮತ್ತು ಉದ್ಯೋಗೇತರ ಆದಾಯಗಳು ಇಲ್ಲಿ ಪ್ರಮುಖವಾದವು.ನಾಗಾಲೋಟದ ಪ್ರಪಂಚದೊಂದಿಗೆ ಸ್ಪರ್ಧಿಸಲು ಉದ್ಯೋಗೇತರ ಆದಾಯ ಸಹಕಾರಿ.ಉದ್ಯೋಗೇತರ ಆದಾಯಕ್ಕೆ ಉತ್ತಮ ಉದಾಹರಣೆ;- ಎಲ್..ಸಿ ,ಷೇರು ಮಾರುಕಟ್ಟೆ ವ್ಯವಹಾರ ಮುಂತಾದವು.ಇವುಗಳು ನಮ್ಮದೈನಂದಿನ ಕೆಲಸಕಾರ್ಯಗಳ ಜೊತೆಯಲ್ಲೇ ನಂಟು ಬೆಳೆಸಿಕೊಂಡು ಬರುವಂತವಾಗಿದೆ.ಇವುಗಳು ಉತ್ತಮ ಆದಾಯದ ಮೂಲಗಳೂ ಹೌದು. ಇದಕ್ಕೆ ನಮ್ಮ ಸ್ವಲ್ಪ ಬುದ್ದಿಶಕ್ತಿ ಉಪಯೋಗಿಸಬೇಕಷ್ಟೆ.

 

         ಇನ್ನು ಕ್ರಷಿ  ಸಂಬಂಧಿ ಕೆಲಸಗಳು ಇವೆ.ಅಂದರೆ ವ್ಯವಸಾಯಕ್ಕೆ ಸಂಬಂದಪಟ್ಟಂತೆ ಉದ್ಯೋಗ.ಅದು ವ್ಯವಸಾಯೋಪಕರಣಗಳ ತಯಾರಿಕೆ,ವಿದ್ಯುತ್ ದುರಸ್ಥಿಕಾರ್ಯ,ಮುಂತಾದವು.ಇನ್ನು ಗಿರಣಿಗಳನ್ನು ಪ್ರಾರಂಭಿಸಿ,ಅಕ್ಕಿ,ಗೋಧಿ,ಮುಂತಾದವುಗಳ ಹಿಟ್ಟು,ರವೆ ತಯಾರಿಸೆ ಮಾರಾಟ ಮಾಡುವ ಕಾರ್ಯ,ಹಾಲು ಸಂಗ್ರಹಣಾ ಕೇಂದ್ರ ಮುಂತಾದ ಕೆಲಸಗಳು.ಇವುಗಳಿಗೆ ಹಣಕಾಸಿನ ನೆರವನ್ನು ಸಹಕಾರಿ ಬ್ಯಾಂಕುಗಳು ನೀಡುತ್ತದೆ.ಇನ್ನೂ ಸ್ವಲ್ಪ ಮುಂದುವರೆದರೆ ಹೋಟೆಲ್,ಬೇಕರಿ ಉದ್ಯಮ..ಸದ್ಯಕ್ಕೆ ಕ್ಷೇತ್ರವೇ ಉನ್ನತಮಟ್ಟದಲ್ಲಿದೆ.ಇವುಗಳಿಗೆ ಒಂದು ನಿರ್ಧಿಷ್ಟ ಬಂಡವಾಳ,ಬುದ್ದಿಶಕ್ತಿ,ಕಾರ್ಯದಕ್ಷತೆ ಮತ್ತು ಗುಣವಿಶೇಷಗಳಿದ್ದರೆ ಸಾಕು.ಎಲ್ಲಕ್ಕೂ ಮೊದಲು ತನ್ನೂರಲ್ಲೇ ಕೆಲಸ ಮಾಡುತ್ತಿದ್ದರೆ ಜನರು ಹೀನ ಭಾವನೆಯಿಂದ ನೋಡುತ್ತಾರೆನ್ನುವ ಕೀಳು ಮನೋಭಾವವನ್ನು ತೆಗೆದುಹಾಕಬೇಕು.ಕಡಿಮೆ ವಿಧ್ಯಾಭ್ಯಾಸ ಮಾಡಿದವರೂ ಸಾಧನೆ ಮಾಡಬಹುದು.ಅಂಬಾನಿ,ಓಬೇರಾಯ್,ನಾರಾಯಣ ಮೂರ್ತಿ,ವಿಶ್ವಖ್ಯಾತ ಬಿಲ್ ಗೇಟ್ಸ್ ಮುಂತಾದವರು ಕಡುಬಡತನ ಮತ್ತು ಕಡಿಮೆ ವಿದ್ಯಾಭ್ಯಾಸ ಹೊಂದಿದವರು.ಆದರೆ ಅವರುಗಳೇ ಹುಟ್ಟುಹಾಕಿದ ಸಂಸ್ಥೆಗಳು ಇಂದು ಲಕ್ಷಾಂತರ ಜನರಿಗೆ ಊಟ ಹಾಕುತ್ತಿದೆ.

 

          ನಗರಗಳಲ್ಲಿ  ,ಸ್ವಲ್ಪಮಟ್ಟಿಗೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಕಾಣಬಹುದು.ಉದ್ಯೋಗಕ್ಕಾಗಿ ನಾವು ಬಹುರಾಷ್ಟ್ರೀಯ ಕಂಪನಿಗಳನ್ನೇ ಆಧರಿಸಬೇಕಿಲ್ಲ.ಪಠ್ಯೇತರ ಚಟುವಟಿಕೆ,ಸಾಮಾಜಿಕ ಚಟುವಟಿಕೆಗಳ ಕೆಲಸವನ್ನು ಮಾಡಬಹುದು.ಸೋಲೆ ಗೆಲುವಿನ ಸೋಪಾನ,ಸೋಲೇ ನಮಗೆ ಗೆಲುವಿನ ದಾರಿ ತೋರಿಸುತ್ತದೆ.ಸೋತೆವೆಂದು ಮೂಲೆ ಕೂತರೆ ಮಾತ್ರ ಕೆಲಸವಾಗದು.ಯಾವುದೇ ಕೆಲಸ ಮಾಡುವಾಗಲೂ ಒಂದು ನಿರ್ಧಿಷ್ಟ ಗುರಿ ಇಟ್ಟುಕೊಂಡು,ನಿಯಮಿತ ವೆಚ್ಚದಲ್ಲಿ ಕಾರ್ಯವೆಸಗಿ ಜಯ ಸಾಧಿಸಿದರೆ ಅದಕ್ಕಿಂತ ನೆಮ್ಮದಿ ಮತ್ತೆಲ್ಲೂ ಸಿಗದು.ಹಲವು ಸಂಘ  ಸಂಸ್ಥೆಗಳು ಇದರ ಬಗ್ಗೆ ಜನಜಾಗ್ರತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.ಇದರ ಉದ್ದೇಶ ಓದಿನ ಜೊತೆಗೆ ವ್ಯರ್ಥವಾಗುವ ಸಮಯದಲ್ಲಿ ಹೇಗೆ ಹಣ ಸಂಪಾದಿಬಹುದೆಂದು ತಿಳಿಸಿಕೊಡುವುದು.ಇಂತಹ ಹಲವಾರು ಸಂಘಟನೆಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.ವೇಗದ ಜಗತ್ತಿಗೆ ಅದು ಚಲಿಸುವ ದಿಕ್ಕಲ್ಲಿ ಮೈಯೊಡ್ಡಿ ನಿಂತರೆ ಅದು ತಾನಾಗೇ ನಮ್ಮನ್ನು ತಳ್ಳಿಕೊಂಡು ಹೋಗುತ್ತದೆ.ಜನರಲ್ಲಿ ವಾಸ್ತವತೆಯ ಅರಿವು ,ತಾಂತ್ರಿಕತೆ,ಸ್ಪರ್ಧಾತ್ಮಕ ಆಲೋಚನೆ ಮೂಡಿದಾಗ ಉದ್ಯೋಗ ಮರೀಚಿಕೆ ಎಂಬ ಭೂತ ಓಡಿಹೋಗಿ,ಉದ್ಯೋಗ ಎಲ್ಲರ ಕೈಗೆಟುಕುವ ಮಾವಿನಹಣ್ಣಾಗುವುದರಲ್ಲಿ ಸಂದೇಹವೇ ಇಲ್ಲ.

 

 

- ನಾಗಭೂಷಣ ಗುಮಗೋಡು.