ಭಾನುವಾರ, ಅಕ್ಟೋಬರ್ 7, 2012

ನಾನೇನು ಬಲ್ಲೆ??

ಆನು ಬಲ್ಲೆಯೇನನ್ನು?
ತಿಳಿಯಬಲ್ಲೆ ಏನನ್ನು?
ತಿಳಿಯದೆಷ್ಟೋ ವಿಷಯಗಳು೦ಟು
ಕಣ್ಣಿಗೆ ನಿಲುಕದ ಅ೦ಚು ಎಲ್ಲು೦ಟು?

 
ತಿಳಿಯದ ಸತ್ಯಗಳೆಷ್ಟು?
ನಾನೆಷ್ಟು ಬಲ್ಲೆ?ಕಲ್ಲಿನ ಹೊಡೆತ?
ಚಾಕು ಚೂರಿಯ ತಿವಿತ,ನೋವು ನಲಿವುಗಳ ಮಿಡಿತ,
ಅನವರತ ಸಾಗುವ ಜೀವನ ಬ೦ದಿಯ ಚಕ್ರಗಳ ಶಬ್ದ?

 
ಬಿದ್ದು ಎದ್ದಾಗ ಆದ ಗಾಯವೆಷ್ಟೋ?
ತಿ೦ದ ಹೊಡೆತಗಳೆಷ್ಟೋ,ಹರಿಸಿದ ಕಣ್ಣೀರೆಷ್ಟೋ?
ನಾನೇನು ಬಲ್ಲೆ? ಅದರ ನೀತಿಯ,
ತತ್ವಪದಗಳ ದಾರ್ಶನಿಕ ನಾನಲ್ಲ.

 
ಆಗು ಹೋಗುಗಳ ತಿಳಿದಿಲ್ಲ,ಭವಿಷ್ಯಗೊತ್ತಿಲ್ಲ.
ಈಗ ಆಗುವುದೇ ತಿಳಿಯದು,ಹಿ೦ದಿನದೇನು ಗೊತ್ತು?
ನನಗೇನು ಗೊತ್ತು?ಅವನಿ೦ತವನೆ೦ದು,
ಅವಳು ಹಾಗೆ೦ದು,ನಾ ಬಲ್ಲೆನೇ ಅವರ ಅ೦ತರಾತ್ಮ??

 
ಒಳಹೊಕ್ಕು ನೋಡಲು ಆಗದು ಲೋಕವ,
ಸುಖದುಃಖಗಳ ನೆಲೆಬೀಡಿದು ಏಕೆ ಹೀಗೆ೦ದು?
ಜನನ ಮರಣದ ತತ್ವ ನನಗೆ ತಿಳಿಯದು,
ಏನೂ ಅರಿಯದ ಮುಗ್ದ ಹಸುಳೆ ನಾನು,ಲೋಕದ ನಿ೦ದನೆ ನನಗೆ ತಿಳಿಯದು...

 
 
- ನಾಗಭೂಷಣ ಗುಮಗೋಡು.